Friday 29 June 2012

ಎಎಸ್‌ಎನ್ ಹೆಬ್ಬಾರ್ ಅವರಿಗೆ ಪತ್ರಿಕಾ ದಿನಾಚರಣೆಯ ಗೌರವ
ಅಜೆಕಾರು: ಪತ್ರಕರ್ತರ ವೇದಿಕೆ(ರಿ) ಬೆಂಗಳೂರು ಇದರ ಉಡುಪಿ ಜಿಲ್ಲಾ ಘಟಕ ನೀಡುವ ಐದನೆ ವರ್ಷದ ಪತ್ರಿಕೋದ್ಯಮ ದಿನಾಚರಣೆಯ ಗೌರವವನ್ನು ಹಿರಿಯ ಪತ್ರಕರ್ತ, ಸಮಾಜ ಸೇವಾಸಕ್ತ, ವಕೀಲ ಕುಂದಾಪುರದ ಎ.ಎಸ್.ಎನ್ ಹೆಬ್ಬಾರ್ ಅವರಿಗೆ ಜೂನ್ ೩೦ ರಂದು ನೀಡಲಾಗುತ್ತಿದೆ ಎಂದು ವೇದಿಕೆಯ ಉಡುಪಿ ಜಿಲ್ಲಾಧ್ಯಕ್ಷ ಶೇಖರ ಅಜೆಕಾರು ತಿಳಿಸಿದ್ದಾರೆ. ಪತ್ರಕರ್ತರ ವೇದಿಕೆ,ಕುಂದಾಪ್ರ ಡಾಟ್ ಕಾಮ್, ಶ್ರೀ ಸ್ಕೂಲ್ ಆಫ್ ಜರ್ನಲಿಸಂ ಮೂಡುಬಿದಿರೆ ಇವುಗಳ ಸಂಯುಕ್ತ ಆಶ್ರಯದಲ್ಲಿ ಕಾರ್ಯಕ್ರ ನಡೆಯುತ್ತಿದ್ದು ವೇದಿಕೆ ಪತ್ರಿಕಾ ದಿನಾಚರಣೆಯನ್ನು ’ಹಿರಿಯರೆಡೆಗೆ ನಮ್ಮ ನಡಿಗೆ’ ಧ್ಯೇಯದೊಂದಿಗೆ ನಡೆಸುತ್ತಿದೆ. ವಿವಿಧ ಸ್ಥಳೀಯ ಸಂಸ್ಥೆಗಳು, ಅಂತಾರಾಷ್ಟ್ರೀಯ ಸಂಸ್ಥೆಗಳು ಮೂಲಕ ಮತ್ತು ವಿವಿಧ ಪತ್ರಿಕೆಗಳ ಮೂಲಕ ಗಮನ ಸೆಳೆದಿದ್ದು ಉಡುಪಿ ಜಿಲ್ಲಾ ಸಾಹಿತ್ಯ ಸಮ್ಮೇಳನ ಅಧ್ಯಕ್ಷತೆಯ ಗೌರವಕ್ಕೆ ಪಾತ್ರರಾಗಿದ್ದರು. ಸುಮಾರು ಐವತ್ತು ವರ್ಷಗಳಿಂದ ಕಾರ್ಯಪ್ರವೃತ್ತರಾಗಿರುವ ಹಿರಿಯ ಪತ್ರಕರ್ತ ಹೆಬ್ಬಾರರು ಉದಯವಾಣಿ,ಪ್ರಜಾವಾಣಿ,ಡೆಕ್ಕನ್ ಹೆರಾಲ್ಡ್ ಪತ್ರಿಕೆಗಳ ಮೂಲಕ ಪತ್ರ ಗಮನ ಸೆಳೆದವರು. ಕನ್ನಡ ಸಾಹಿತ್ಯ ಪರಿಷತ್ ಉಡುಪಿ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಸ್ಫೂರ್ತಿ ಧಾಮದ ಕೇಶವ ಕೋಟೇಶ್ವರ, ಕುಂದಾಪ್ರ ಡಾಟ್ ಕಾಮ್ ಮುಖ್ಯಸ್ಥ ಸುನೀಲ್ ಬೈಂದೂರ್, ಉಡುಪಿ ಎಂ.ಜಿ ಎಂ.ಕಾಲೇಜಿನ ಪತ್ರಿಕೋದ್ಯಮ ವಿಭಾಗ ಮುಖ್ಯಸ್ಥ ಬೋರ್ಗಲ್‌ಗುಡ್ಡೆ ಮಂಜುನಾಥ್ ಮುಖ್ಯ ಅತಿಥಿಗಳಾಗಿರುವರು. ಅಂಬಾತನಯ ಮುದ್ರಾಡಿ, ವಿದ್ವಾನ್ ಬಿ ಚಂದ್ರಯ್ಯ, ಉಮೇಶ್ ರಾವ್ ಎಕ್ಕಾರ್, ಕು.ಗೋ ಅವರು ಈ ಹಿಂದಿನ ವರ್ಷಗಳಲ್ಲಿ ಈ ಗೌರವಕ್ಕೆ ಪಾತ್ರರಾಗಿದ್ದರು. ಹಿರಿಯ ಪತ್ರಕರ್ತ ಎ.ಎಸ್.ಎನ್.ಹೆಬ್ಬಾರ್ ಪರಿಚಯ ಉಡುಪಿ ಜಿಲ್ಲೆಯ ಹಿರಿಯ ಪತ್ರಕರ್ತರಾದ ಶ್ರೀ ಎ.ಎಸ್.ಎನ್.ಹೆಬ್ಬಾರರ ಪತ್ರಿಕೋದ್ಯಮಕ್ಕೆ ೫೦ ವರ್ಷಗಳಿಗೂ ಮಿಕ್ಕಿದ ಇತಿಹಾಸವಿದೆ. ೧೯೫೭ರಿಂದ ೧೯೬೦ರ ವರೆಗೆ ಮಂಗಳೂರಿನ ಸರಕಾರಿ ಕಾಲೇಜಿನಲ್ಲಿ ವಿದ್ಯಾರ್ಥಿಯಾಗಿದ್ದಾಗಿನಿಂದಲೇ ಸುದ್ದಿ ಬರೆಯತೊಡಗಿದ ಹೆಬ್ಬಾರರು ಅಂದಿನ ’ನವಭಾರತ’ ಪತ್ರಿಕಾಲಯಕ್ಕೆ ಹೋಗಿ ಸಂಪಾದಕ ಬನ್ನಂಜೆ ರಾಮಾಚಾರ್ಯರ ಕೈಯಲ್ಲೇ ಸುದ್ದಿ ನೀಡುತ್ತಿದ್ದವರು. ಹಾಗಾಗಿಯೇ ೧೯೬೯ರಲ್ಲಿಯೇ ಮಣಿಪಾಲದ ’ಉದಯವಾಣಿ’ಯ ಅಧಿಕೃತ ಆರಂಭದ ಮುನ್ನ ಅದರ ಪ್ರಾಯೋಗಿಕ ಸಂಚಿಕೆಗಳಿಗೂ ಸಂಪಾದಕ ರಾಮಾಚಾರ್ ಆದೇಶದಂತೆ ಹೆಬ್ಬಾರರೇ ಕುಂದಾಪುರದಿಂದ ಸುದ್ದಿ ಕಳುಹಿಸುತ್ತಿದ್ದವರು. ೧೯೭೦ ಜನವರಿ ೧ರಿಂದ ’ಉದಯವಾಣಿ’ ಪ್ರಾರಂಭವಾದಾಗಿನಿಂದಲೂ ಕುಂದಾಪುರ ತಾಲೂಕಿನ ಏಕೈಕ ವರದಿಗಾರರಾಗಿ ಅವರು ಅನುಪಮ ಸೇವೆ ಸಲ್ಲಿಸಿದ್ದರು. ಅವರ ಮಾನವೀಯ ಆಸಕ್ತಿಯ ವರದಿಗಳು, ಸಾಹಿತ್ಯಮಯ ಶೀರ್ಷಿಕೆಗಳು ಪ್ರಸಿದ್ಧ. ಈ ಮಧ್ಯೆ ಅವರ ಪತ್ರಿಕಾ ವೃತ್ತಿಯ ಆಸಕ್ತಿ ಕಂಡು ಅವಿಭಜಿತ ದ.ಕ.ಜಿಲ್ಲೆಯ ಹಿರಿಯ ಪತ್ರಕರ್ತರಾಗಿದ್ದ ಬಂಧು ಕೆ.ಎಸ್.ಉಪಾಧ್ಯಾಯರೊಂದಿಗೆ ಕುಂದಾಪುರಕ್ಕೆ ಬಂದಿದ್ದ ಅಂದಿನ ಪ್ರಜಾವಾಣಿ, ಡೆಕ್ಕನ್ ಹೆರಾಲ್ಡ್‌ಗಳ ಸಂಪಾದಕರುಗಳಾದ ಖಾದ್ರಿ ಶಾಮಣ್ಣ ಮತ್ತು ಆರ್.ಶೇಷಾದ್ರಿ ೧೯೬೫ರಲ್ಲೇ ಹೆಬ್ಬಾರರನ್ನು ಆ ಎರಡೂ ಪತ್ರಿಕೆಗಳ ತಾಲೂಕು ಸುದ್ದಿಗಾರರನ್ನಾಗಿಸಿ ನೇಮಕ ಮಾಡಿದ್ದರು. ಹೆಬ್ಬಾರರ ’ಸರ್ಪರಾಜನ ಸೈಕಲ್ ಸವಾರಿ’ ಎಂಬ ಮಾನವೀಯ ಆಸಕ್ತಿಯ ಸುದ್ದಿ ಚಿತ್ರ ರಾಷ್ಟ್ರಮಟ್ಟದಲ್ಲಿ ಸಂಚಲನ ಮೂಡಿಸಿ ಪ್ರಜಾವಾಣಿಯ ಸಂಪಾದಕ ಟಿ.ಎಸ್.ಆರ್.ರಿಂದಲೂ ಶಾಭಾಷ್‌ಗಿರಿ ಪಡೆದಿತ್ತು. ಕುಂದಾಪುರ ಕರಾವಳಿಯಲ್ಲಿ ಹುಗಿದಿಟ್ಟ ಕಳ್ಳ ಬೆಳ್ಳಿ ಪತ್ತೆ ಕುರಿತು ಅವರ ವರದಿಗಳು ಆಗ ಜನರಿಗೆ ರಸಗವಳವಾಗಿತ್ತು. ಕಲ್ಮರ್ಗಿಯ ಕುಡುಬಿಯರ ಕೇರಿಗೆ ಬೆಂಕಿ ಬಿದ್ದಾಗ ಅಲ್ಲಿಗೆ ಧಾವಿಸಿ ಹೋಗಿ ಅವರು ಬರೆದ ಚಿತ್ರ ಸಹಿತ ಮನಕಲುಕುವ ವರದಿಗಳಿಂದಾಗಿ ಇಡೀ ಕೇರಿಯ ಪುನರ್‌ನಿರ್ಮಾಣ ದಾಖಲೆ ವೇಗದಲ್ಲಿ ಕೊಡುಗೈದಾನಿಗಳ ನೆರವಿನಿಂದ ಆಗಿತ್ತು. ಗಣಪತಿ ಎಂಬ ಆಂಧ್ರದ ಬಾಲಕ ದಾರಿ ತಪ್ಪಿ ಬೈಂದೂರಿಗೆ ಬಂದು ಗೊತ್ತುಗುರಿ ಗೊತ್ತಿಲ್ಲದೇ ಪೋಲೀಸ್ ಠಾಣೆಯಲ್ಲಿ ಇದ್ದಾಗ, ’ಈ ನಾಡು’ ಸಂಪಾದಕ ರಾಮೋಜಿರಾವ್‌ರನ್ನು ಸಂಪರ್ಕಿಸಿ ತೆಲುಗು ಪತ್ರಿಕೆಗೂ ಚಿತ್ರ ಸಹಿತ ತನ್ನ ವರದಿ ಪ್ರಕಟವಾಗುವಂತೆ ಮಾಡಿ ಗಣಪತಿ ತನ್ನ ಹೆತ್ತವರನ್ನು ಸೇರಿಕೊಳ್ಳುವಂತೆ ಮಾಡಿದ ಕೀರ್ತಿ ಹೆಬ್ಬಾರರದು. ಹೀಗೆ ಹತ್ತು ಹಲವು ಸಾರ್ಥಕ, ಸ್ವಾರಸ್ಯಕರ, ಜನೋಪಕಾರಿ ವರದಿಗಳ ಸರದಾರರಾಗಿರುವ ಎ.ಎಸ್.ಎನ್.ಹೆಬ್ಬಾರರಿಗೆ ಈಗ ೭೨ ವರ್ಷ ವಯಸ್ಸಾಗುತ್ತಿದ್ದರೂ ಅಂಕಣಕಾರರಾಗಿ ಈಗಲೂ ಬರೆಯುತ್ತಾ ಜನಾಕರ್ಷಣೆ ಪಡೆದಿದ್ದಾರೆ. ಇನ್ನೂ ಬರೆಯುತ್ತಲೇ ಇದ್ದಾರೆ. ಅನೇಕ ದೇಶಗಳನ್ನು ಸುತ್ತಿ ಬಂದ ಅವರ ಪ್ರವಾಸ ಕಥನಗಳು ಸ್ವಾರಸ್ಯಕರ. ’ಕುಂದಪ್ರಭ’ ಮತ್ತು ’ಸುದ್ದಿಮನೆ’ಗಳಲ್ಲಿ ಅವುಗಳನ್ನು ಪ್ರಕಟಿಸಿದ್ದಾರೆ. ಕಥೆ, ನಗೆಲೇಖನ, ಪ್ರಬಂಧ, ಕವಿತೆಗಳಿಗೂ ಅವರು ಸಿದ್ಧ ಹಸ್ತರು. ವಿದ್ಯಾರ್ಥಿಯಾಗಿದ್ದಾಗಲೇ ಅವರು ಬರೆದ ಕಥೆಗೆ ಪ್ರಜಾವಾಣಿ ದೀಪಾವಳಿ ಕಥಾಸ್ಪರ್ಧೆಯ ಬಹುಮಾನ ಬಂದಿತ್ತು. ಕುಂದಾಪುರ ತಾಲೂಕು ಪತ್ರಕರ್ತರ ಸಂಘದ ಸ್ಥಾಪಕ ಅಧ್ಯಕ್ಷರಾಗಿದ್ದ ಎ.ಎಸ್.ಎನ್.ಹೆಬ್ಬಾರರು ಉಡುಪಿ ಜಿಲ್ಲೆ ಕಾರ್ಯನಿರತ ಪತ್ರಕರ್ತರ ಸಂಘಟನೆಗೆ ಶ್ರಮಿಸಿ, ಅವರೇ ಅದಕ್ಕೊಂದು ಸಂವಿಧಾನ ರೂಪಿಸಿ, ಅದರ ಸ್ಥಾಪಕ ಉಪಾಧ್ಯಕ್ಷರಾಗಿದ್ದವರು. ಈಗಲೂ ಈ ಎರಡು ಸಂಸ್ಥೆಗಳ ಆಜೀವ ಸದಸ್ಯರು. ಕುಂದಾಪುರದಲ್ಲಿ ೧೯೬೩ರಿಂದ ವಕೀಲರಾಗಿ ಸೇವೆ ಸಲ್ಲಿಸುತ್ತಿರುವ ಅವರ ವಕೀಲಿ ವೃತ್ತಿಗೆ ಮುಂದಿನ ವರ್ಷ ೫೦ ತುಂಬುತ್ತದೆ. ಅವರ ತಂದೆಯವರೂ ಖ್ಯಾತ ವಕೀಲರೇ. ಅಸಾಧಾರಣ ಸಂಘಟಕರೂ ಆಗಿರುವ ಅವರು ದ.ಕ ಜಿಲ್ಲಾ ವಕೀಲರ ಸಂಘದ ಸ್ಥಾಪಕ ಕಾರ್ಯದರ್ಶಿಯಾಗಿದ್ದವರು. ರೋಟರಿ ಜಿಲ್ಲಾ ೩೧೮೦ರ ಶತಾಬ್ದಿ ಗವರ್ನರ್, ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸ್ಥಾಪಕ ಅಧ್ಯಕ್ಷರಾಗಿ ಎರಡು ಅವಧಿಗೆ ಸೇವೆ, ಉಡುಪಿ ಜಿಲ್ಲಾ ೭ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ, ಹಂಗಾರಕಟ್ಟೆ ಯಕ್ಷಗಾನ ಕಲಾಕೇಂದ್ರದ ಅಧ್ಯಕ್ಷ, ಬಿ.ಆರ್.ರಾಯರ ಹಿ.ಪ್ರಾ.ಶಾಲೆಯ ಆಡಳಿತ ಮಂಡಳಿಯ ಅಧ್ಯಕ್ಷ, ರೂಪರಂಗ ನಾಟಕ ಸಂಸ್ಥೆಯ ಅಧ್ಯಕ್ಷ, ಕುಂದಾಪುರ ಜೇಸಿಸ್ ಸ್ಥಾಪಕ ಅಧ್ಯಕ್ಷ, ಭಾಷಣ ಕಲೆಯ ಅಪ್ರತಿಮ ತರಬೇತುದಾರ, ಸ್ವತಃ ವಾಗ್ಮಿ, ನಗೆಗಾರ, ಅಭಿನಯಕಾರ ಹೀಗೆ ಹತ್ತು ಹಲವು ಸಂಸ್ಥೆಗಳಲ್ಲಿ ಸಕ್ರಿಯರಾಗಿ ಹತ್ತು ಹಲವು ಪ್ರತಿಭೆಗಳಿಂದ ಮಿಂಚುತ್ತಿರುವ ಶ್ರೀ ಎ.ಎಸ್.ಎನ್.ಹೆಬ್ಬಾರರು ಹಿರಿಯ ಪತ್ರಕರ್ತರಾಗಿ ಈಗಲೂ ಸಮಾಜಮುಖಿಯಾಗಿ ಕ್ರೀಯಾಶೀಲರಾಗಿ ಸೇವೆ ಸಲ್ಲಿಸುತ್ತಲೇ ಇದ್ದಾರೆ. ಕುಂದಾಪುರದಲ್ಲಿ ಜನಿಸಿ ಅಲ್ಲೇ ’ನುಡಿ’ ಮನೆಯಲ್ಲಿ ನೆಲೆಸಿರುವ ಹೆಬ್ಬಾರರು ಪತ್ನಿ ಶ್ರೀಮತಿ ಸುಧಾ, ಮೂವರು ಮಕ್ಕಳು ರಘುನಂದನ, ಸ್ವಾತಿ, ಶ್ರೀವತ್ಸ ಮತ್ತು ಆರು ಮೊಮ್ಮಕ್ಕಳನ್ನು ಹೊಂದಿದ್ದು ಸುಖೀ ಕುಟುಂಬ ಪಡೆದಿದ್ದಾರೆ.

No comments: